ಮಲ್ಪೆ
	ಕರ್ನಾಟಕ ರಾಜ್ಯದ ಉಡುಪಿ ತಾಲ್ಲೂಕಿನ ಒಂದು ಪಟ್ಟಣ ಮತ್ತು ಬಂದರು. ಮಂಗಳೂರಿನ ಉತ್ತರಕ್ಕೆ 65 ಕಿಮೀ ದೂರದಲ್ಲೂ ಉಡುಪಿಯ ಪಶ್ಚಿಮಕ್ಕೆ 5 ಕಿಮೀ ದೂರದಲ್ಲೂ ಇದೆ. ಮಲ್ಪೆಯ ಭೌಗೋಳಿಕ ಪರಿಸರ ರಮಣೀಯ. ಉದ್ಯಾವರ ನದಿಯು ಪಾಂಗಾಳ ಹೊಳೆಯೊಂದಿಗೆ ಜೊತೆಗೂಡಿದ ತರುವಾದು ಕಡಲ ಸೆರಗಿನಲ್ಲೇ ಸುಮಾರು 8 ಕಿಮೀ ದೂರ ಉತ್ತರಕ್ಕೆ ಹರಿದು ಕಲ್ಮಾಡಿ ಹೊಳೆಯೆಂಬ ಕಿರುತೊರೆಯನ್ನು ಕೂಡಿಕೊಂಡ ಮೇಲೆ ಸಮುದ್ರದಲ್ಲಿ ಸಂಗಮವಾಗುತ್ತದೆ. ಈ ನದಿಯ ಅಳಿವೆಗೆ ತಾಗಿದಂತೆ ಉತ್ತರಕ್ಕೆ ಮಲ್ಪೆ ಇದೆ. 

	ಇಲ್ಲಿಯ ಕಡಲ ಕೆರೆಗೆ ಸಮಾಂತರವಾಗಿ ಸು. 2 ಕಿಮೀ ದೂರದಲ್ಲಿ ಸಮುದ್ರ ಮಧ್ಯದಲ್ಲಿರುವ ಸುಮಾರು 2-5 ಕಿ.ಮೀ ಉದ್ದ ದರಿಯಾ ಬಹದ್ದರ್‍ಗಡ ಶಿಲಾದ್ವೀಪಸ್ತೋಮ ಮಲ್ಪೆಗೆ ನಿಸರ್ಗನಿರ್ಮಿತ ರಕ್ಪಣಬಾಹುವಿನಂತೆ ಪಸರಿಸಿದೆ. ನಡುಗಡ್ಡೆಗಳ ಉತ್ತರಕ್ಕೆ ತೆಂಗಿನ ದ್ವೀಪ, ಅಜಕಲ್ ಬಂಡೆ, ನಡುಬಂಡೆ-ಇವುಗಳಿಂದ ಕೂಡಿದ ಸೇಂಟ್ ಮೇರಿಸ್ ದ್ವೀಪಗಳ ಗುಂಪು ಪ್ರಾಕೃತಿಕ ಲಕ್ಷಣದ ನೆಲೆ, ತೆಂಗಿನ ದ್ವೀಪದ ದಕ್ಷಿಣ ಭಾಗದಲ್ಲಿ ಕಾಣಸಿಗುವ ಬೆಸಾಲ್ಟ್ ಶಿಲಾಸ್ತಂಭ ರಚನೆಯಲ್ಲಿಯ ಷಟ್ಕೋಣ ವಿನ್ಯಾಸದ ಆಕರ್ಷಕ ರಮಣೀಯತೆ ಭಾರತದ ಬೇರಾವ ಭಾಗದಲ್ಲೂ ಇಲ್ಲವೆಂದು ಹೇಳಲಾಗಿದೆ. ಚರಿಯಾ ಬಹದ್ದರ್‍ಗಡಕ್ಕೂ ಮಲ್ಪೆ ಬಂದರಿಗೂ ನಡುವಣ ಸಮುದ್ರಭಾಗ, ಬಿರುಗಾಳಿಯಲ್ಲಿ ಹಡಗುಗಳಿಗೂ ದೊಡ್ಡ ಮಚವೆಗಳಿಗೂ (ಸ್ಥಳೀಯ ನೌಕೆ) ಆಶ್ರಯವನ್ನೀಯುವ ಒಳ್ಳೆಯ ರೇವು. ಆ ದ್ವೀಪಸ್ತೋಮದ ನಡುಬಂಡೆಯ ಮೇಲೆ ಒಂದು ದ್ವೀಪಸ್ತಂಭವಿದೆ. ಸೇಂಟ್ ಮೇರಿಸ್ ದ್ವೀಪಗಳ ಮಧ್ಯಕ್ಕೆ ಎದುರರಾದ ಕರಾವಳಿ ತೀರದಲ್ಲಿಯ ವಡಭಾಂಡೇಶ್ವರ ಸಮುದ್ರ ಸ್ನಾನ ಸ್ಥಳ ಜನಪ್ರಿಯವೂ ಸುರಕ್ಷಿತವೂ ಆದದ್ದು. 

	ಮೀನುಗಾರಿಕೆ ಇಲ್ಲಿಯ ಮುಖ್ಯ ಉದ್ಯೋಗ, ಇದಕ್ಕೆ ಸಂಬಂಧಿಸಿದಂತೆ ನಾಡ ಬಲೆಗಳ ಜೊತೆಗೆ ಯಾಂತ್ರೀಕೃತ ದೋಣಿಗಳು ಉಪಯೋಗದಲ್ಲಿವೆ. ಶೀತಲೀಕರಣ ಸ್ಥಾವರಗಳೂ ಮತ್ಸ್ಯಸಂಶೋಧನ ಸಂಸ್ಕರಣ ಕೇಂದ್ರಗಳೂ ಸ್ಥಾಪನೆಯಾಗಿವೆ. ಸಂಸ್ಕರಿಸಿದ ಮೀನುಗಳನ್ನು ಡಬ್ಬಗಳಲ್ಲಿ ತುಂಬಿ ವಿದೇಶಗಳಿಗೆ ಕಳುಹಿಸಲಾಗುತ್ತದೆ. ತೆಂಗಿನ ನಾರಿನ ಕೈಗಾರಿಕೆ ಹೆಂಚಿನ ಕಾರ್ಖಾನೆ ಇತರ ಕೈಗಾರಿಕೆಗಳು ನೈಸರ್ಗಿಕ ಅನುಕೂಲತೆಗಳಲ್ಲಿರುವ ಮಲ್ಪೆ ಬಂದರನ್ನು ಆಧುನಿಕ ಮತ್ಸೋದ್ಯಾಮ ಬಂದರನ್ನಾಗಿ ಮಾರ್ಪಡಿರುವ ಯೋಜನೆ ತಯಾರಿಗಿದ್ದು ಇದರ ವೆಚ್ಚ 2,17 ಕೋಟಿ ರೂಪಾಯಿಗಳೆಂದು ಅಂದಾಜು ಮಾಡಲಾಗಿದೆ. ಇದರಿಂದ ಮಲ್ಪೆ ಕರ್ನಾಟಕ ರಾಜ್ಯದ ಮತ್ಸೋದ್ಯಮ ಅಭಿವೃದ್ಧಿಗೆ ಕಾರಣವಾಗುವುದಲ್ಲದೇ ಸಮುದ್ರ ಸಾರಿಗೆ ಸಂಚಾರಕ್ಕೆ ಅನುಕೂಲವಾಗಿದ್ದು ಇಲ್ಲಿ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆಗಳು ಅಂಚೆ ತಂತಿ ವಿದ್ಯುತ್ ಸೌಕರ್ಯಗಳೂ ಇವೆ. ಮಲ್ಪೆ ಪಟ್ಟಣ ಪಂಚಾಯಿತಿ ಆಡಳಿತಕ್ಕೆ ಸೇರಿದೆ. ಮಲ್ಪೆಯ ಕೊಡುವೂರಿನಲ್ಲಿ ಶಂಕರನಾರಾಯಣ ದೇವಾಲಯವಿದೆ. ವಡಭಾಂಡೇಶ್ವರದಲ್ಲಿ ಮಧ್ವಾಚಾರ್ಯರು ಸ್ಥಾಪಿಸಿದ್ದೆನ್ನಲಾದ ಬಲರಾಮ ದೇವಾಲಯವಿದೆ. 										

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ